ಮಂಗಳೂರು: ತುಳು ಕಲಿಕೆಗೂ ಬಂತು ಕುತ್ತು

ಮಂಗಳೂರು: ತುಳು ಕಲಿಕೆಗೂ ಬಂತು ಕುತ್ತು

0 0
Read Time:4 Minute, 40 Second

ಮಂಗಳೂರು: ಕರಾವಳಿಯ ಉಭಯ ಜಿಲ್ಲೆಗಳಲ್ಲಿ ನಡೆಯುತ್ತಿದ್ದ ತುಳು ಕಲಿಕೆಗೂ ಈಗ ಕುತ್ತು ಬಂದಿದೆ. 
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 42 ಶಾಲೆಗಳಲ್ಲಿ ತುಳು ಬೋಧಿಸುತ್ತಿರುವ 42 ಅತಿಥಿ ಶಿಕ್ಷಕರಿಗೆ ಇನ್ನೂ ‘ಗೌರವ ಸಂಭಾವನೆ’ ಪಾವತಿಯಾಗಿಲ್ಲ. ಈ ಪೈಕಿ ತುಳು ಬೋಧನೆಯನ್ನೇ ನಂಬಿದ ಅತಿಥಿ ಶಿಕ್ಷಕರು ಆರು ತಿಂಗಳಿಂದ ವೇತನ ಸಿಗದೇ ಅತಂತ್ರರಾಗಿದ್ದಾರೆ.
2009ರ ಕರ್ನಾಟಕ ಸರ್ಕಾರದ ಆದೇಶದಂತೆ 2010ರಲ್ಲಿ ಆರನೇ ತರಗತಿಗೆ ತೃತೀಯ ಭಾಷೆ (ಐಚ್ಛಿಕ)ಯಾಗಿ ತುಳು ಕಲಿಕೆ ಆರಂಭಗೊಂಡಿತ್ತು. ಪ್ರಸ್ತುತ ಉಭಯ ಜಿಲ್ಲೆಗಳ 42 ಶಾಲೆಗಳಲ್ಲಿ 6ರಿಂದ 10ನೇ ತರಗತಿ ತನಕ ತುಳುವನ್ನು ಬೋಧಿಸಲಾಗುತ್ತಿದ್ದು, 2,568 ವಿದ್ಯಾರ್ಥಿಗಳಿದ್ದಾರೆ. ವರ್ಷದಿಂದ ವರ್ಷಕ್ಕೆ ತುಳು ಕಲಿಕೆಗೆ ಬೇಡಿಕೆ ಹೆಚ್ಚುತ್ತಿದ್ದರೂ, ಬೋಧಿಸುವ ಶಿಕ್ಷಕರ ಸ್ಥಿತಿ ಅತಂತ್ರವಾಗಿದೆ.
ಈ ತನಕ  ತುಳು ಬೋಧಿಸುವ ಅತಿಥಿ ಶಿಕ್ಷಕರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಗೌರವ ಸಂಭಾವನೆಯನ್ನು ನೀಡುತ್ತಾ ಬಂದಿದೆ. ಪ್ರತಿ ಶಿಕ್ಷಕರಿಗೆ ತಿಂಗಳಿಗೆ ತಲಾ ₹3 ಸಾವಿರದಂತೆ ವಾರ್ಷಿಕ ₹12.6 ಲಕ್ಷ ಅನುದಾನವು ‘ಗೌರವ ಸಂಭಾವನೆ’ಗೆ ಬೇಕಾಗಿದೆ.
ಅಕಾಡೆಮಿ ಅನುದಾನಕ್ಕೇ ಕತ್ತರಿ:
ಆದರೆ, ತುಳು ಸಾಹಿತ್ಯ ಅಕಾಡೆಮಿಗೆ ನೀಡುವ ಅನುದಾನವನ್ನು ಕಳೆದ ಎರಡು ವರ್ಷಗಳಲ್ಲಿ ಸರ್ಕಾರವು ಕಡಿತಗೊಳಿಸಿದ್ದು, ಈ ಬಾರಿ ₹36 ಲಕ್ಷಕ್ಕೆ ಸೀಮಿತಗೊಳಿಸಿದೆ. ಈ ಪೈಕಿ ಅಕಾಡೆಮಿಯು ತನ್ನ ಸಿಬ್ಬಂದಿ ಸಂಬಳ ಹಾಗೂ ಆಡಳಿತ ವೆಚ್ಚಕ್ಕಾಗಿ ₹20 ಲಕ್ಷ ವಿನಿಯೋಗಿಸಿದರೆ, ಅತಿಥಿ ಶಿಕ್ಷಕರ ಗೌರವ ಸಂಭಾವನೆಯನ್ನು ಹೊರತು ಪಡಿಸಿ, ಅಕಾಡೆಮಿಗೆ ವಾರ್ಷಿಕವಾಗಿ ಕೇವಲ ₹3.4 ಲಕ್ಷ ಮಾತ್ರ ಉಳಿಯುತ್ತದೆ.
ಈ ಅನುದಾನದಲ್ಲಿ ಅಕಾಡೆಮಿಯು ವಾರ್ಷಿಕ ಗೌರವ ಪ್ರಶಸ್ತಿ, ಪುಸ್ತಕ ಪುರಸ್ಕಾರಗಳನ್ನೂ ನೀಡಲು ಸಾಧ್ಯವಿಲ್ಲ. ಉಳಿದಂತೆ ಪ್ರಕಟಣೆ, ಕಾರ್ಯಕ್ರಮಗಳ ಆಯೋಜನೆಗಳು ದೂರದ ಮಾತು. ಅಲ್ಲದೇ, ₹36 ಲಕ್ಷದ ಪೈಕಿ ಮೊದಲ ಕಂತಿನ (ತ್ರೈಮಾಸಿಕ) ಅನುದಾನ ಮಾತ್ರ ಸರ್ಕಾರದಿಮದ ಅಕಾಡೆಮಿಗೆ ಬಿಡುಗಡೆಯಾಗಿದೆ. ಹೀಗಾಗಿ, ಅಕಾಡೆಮಿಯಿಂದ ಅತಿಥಿ ಶಿಕ್ಷಕರ ಗೌರವ ಸಂಭಾವನೆ ಬಿಡುಗಡೆ ಆಗಿಲ್ಲ ಎಂದು ಮೂಲಗಳು ದೃಢಪಡಿಸಿವೆ.
ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ: ಕತ್ತಾಲ್‌ಸಾರ್
‘ಕರಾವಳಿಯಲ್ಲಿ ತುಳುವನ್ನು ಉಳಿಸಿ– ಬೆಳೆಸುವ ನಿಟ್ಟಿನಲ್ಲಿ ಅತಿಥಿ ಶಿಕ್ಷಕರು ಸೇವೆ ನೀಡುತ್ತಿದ್ದಾರೆ. ಅವರ ಸೇವೆಯನ್ನು ಗೌರವಿಸಿ, ಇತರ ಅತಿಥಿ ಶಿಕ್ಷಕರ ಮಾದರಿಯಲ್ಲೇ ಅವರ ವೇತನವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನೀಡುವಂತೆ ಮಾಡಲು ಅಕಾಡೆಮಿ ಶ್ರಮಿಸುತ್ತಿದೆ. ಸದ್ಯಕ್ಕೆ ನಮ್ಮ ಅನುದಾನ ಬಿಡುಗಡೆಯಾದ ತಕ್ಷಣವೇ ಪೂರಕ ಕ್ರಮಗಳನ್ನು ಗೌರವ ಸಂಭಾವನೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಾಲ್‌ಸಾರ್ ತಿಳಿಸಿದ್ದಾರೆ.
ಸಾ.ಶಿ.ಇಲಾಖೆಯಿಂದಲೇ ವೇತನಕ್ಕೆ ಕ್ರಮ: ಕೋಟ
‘ಕರಾವಳಿ ಜಿಲ್ಲೆಗಳಲ್ಲಿ ತುಳು ಬೋಧಿಸುವ ಅತಿಥಿ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕವೇ ವೇತನ ಪಾವತಿಸಬೇಕು. ಆ ಮೂಲಕ ಅವರಿಗೆ ಗೌರವಯುತ ಸಂಭಾವನೆ ದೊರೆಯಬೇಕು. ಅಲ್ಲದೇ, ತುಳು ಸಾಹಿತ್ಯಿಕ ಚಟುವಟಿಕೆಗಳಿಗೆ ಅನುದಾನದ ಕೊರತೆಯಾಗಬಾರದು. ಈ ನಿಟ್ಟಿನಲ್ಲಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರನ್ನು ಭೇಟಿ ಮಾಡಿ, ಸಮಸ್ಯೆ ಇತ್ಯರ್ಥ ಪಡಿಸಲು ಪ್ರಯತ್ನಿಸುತ್ತೇನೆ. ತುಳು ಕಲಿಕೆಯ ಮುಂದುವರಿಕೆಗೆ ಮೊದಲ ಆದ್ಯತೆ ನೀಡುತ್ತೇನೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವಾರ್ಷಿಕ ಅನುದಾನ
ವರ್ಷ;  ಅನುದಾನ(ಲಕ್ಷ)
2015–16; 66
2016–17; 71
2017–18; 65
2018–19; 70
2019–2020; 40
2020–21; 36

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Leave a Reply

Your email address will not be published. Required fields are marked *

error: Content is protected !!